ಮತ್ತದೇ …

ಇವತ್ತು ಅದೇಕೋ “ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ” ಭಾವಗೀತೆ ಮನಸ್ಸಿನಲ್ಲಿ ಗುನುಗುತ್ತಿದೆ. ಏನು ಕಾರಣ ಎಂದು ತಿಳಿಯುತ್ತಿಲ್ಲ. ಇಂದು ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್. ಎಲ್ಲವೂ ಮತ್ತೊಮ್ಮೆ ನಿಶ್ಯಬ್ದ. ಹೊರಗೆ ಬೀದಿಯಲ್ಲಿ ಜನರಿಲ್ಲ, ಜೋರಾಗಿ ಸದ್ದು ಮಾಡುವ ವಾಹನಗಳಿಲ್ಲ. ದಿನವೂ ತನ್ನಲ್ಲಿ ಜಾಗವಿಲ್ಲದಿದ್ದರೂ ಜನರನ್ನು ತುಂಬಿಕೊಂಡು ಹೋಗುವ ಬಸ್ಸುಗಳ ಅಬ್ಬರವಿಲ್ಲ. ಕೇವಲ ಆಕಾಶದಲ್ಲಿ ಹಾರಾಡುತಿರುವ ವಿಮಾನದ ಸದ್ದು ಮೇಲಿಂದ ಮೇಲೆ ಕೇಳುತ್ತಿದೆ. ಪಕ್ಕದ ಬೀದಿಯಲ್ಲಿ ಮಕ್ಕಳು ಸಂತೋಷದಿಂದ ಕ್ರಿಕೆಟ್ ಆಡುತ್ತಿದ್ದಾರೆ. ಅದೇಕೋ ಇಂದು ಮನಸ್ಸಿನಲ್ಲಿ ಬೇಸರ.

ಕಳೆದ ಒಂದು ವರ್ಷದಲ್ಲಿ ಮೂರನೆಯ ಬಾರಿ ಕರ್ನಾಟಕ ಬಂದ್. ನಾನು ಕೇರಳ, ಬಂಗಾಳವೆಂದರೆ ಬಂದ್ ಎಂದು ಅಣಗಿಸಿಸುತ್ತಿದ್ದೆ. ಈಗಿನ ಪರಿಸ್ಥಿತಿ ನೋಡಿದರೆ ಕರ್ನಾಟಕವೂ ಅವರಿಗೆ ಕಮ್ಮಿಯಿಲ್ಲ ಎಂದೆನಿಸುತ್ತಿದೆ. ಆದರೂ ಕೇರಳ, ಬಂಗಾಳವನ್ನು ಬಂದ್ ವಿಷಯದಲ್ಲಿ ಸೋಲಿಸಲು ಸಾಧ್ಯವಿಲ್ಲ ಬಿಡಿ.

ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಇಂದು ಬಂದ್. ಕಾವೇರಿ ನ್ಯಾಯ ಮಂಡಳಿಯ ತೀರ್ಪು ತಮಿಳುನಾಡಿಗೆ ಹೆಚ್ಚಿನ ಪಾಲನ್ನು ನೀಡಿದೆ. ಕರ್ನಾಟಕಕ್ಕೆ ಕಿರಿಯ ಪಾಲು ಸಿಕ್ಕಿರುವುದು ನಮ್ಮಿಂದ ಸಹಿಸಲಾಗುತ್ತಿಲ್ಲ. ಸಾವಿರ ಪುಟಗಳ ತೀರ್ಪುನ್ನು ಓದಿದರಷ್ಟೆ ನಿಜವಾದ ಅಂಕಿ-ಅಂಶಗಳು ತಿಳಿಯುತ್ತವೆ. ಪ್ರಜಾವಾಣಿ ಪತ್ರಿಕೆಯಲ್ಲಿ ತೀರ್ಪನ್ನು ಎಳೆ-ಎಳೆಯಾಗಿ ಬಿಡಿಸಿ ಅದನ್ನು ಪ್ರಕಟಿಸುತ್ತಿದ್ದಾರೆ. ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಬಾಧಕಗಳೇ ಇವೆ ಎಂದು ಹೇಳಿದ್ದಾರೆ.

ತೀರ್ಪು ಬಂದಾಕ್ಷಣ ಹೆಚ್ಚಿನ ಕನ್ನಡಿಗರೆಲ್ಲಾ ಕರುಣಾನಿಧಿ ಸಮೇತ ಕೇಂದ್ರದಲ್ಲಿರುವ ತಮಿಳನಾಡಿನ ಮಂತ್ರಿಗಳ ಕೈವಾಡವೆಂದು ತಮ್ಮ ಕೋಪ, ಸಂಕಟವನ್ನು ತೋರಿದರು. ಆದರೆ ಇದೆಷ್ಟು ಸರಿ ? ಈ ತೀರ್ಪನ್ನು ನೋಡಿದರೆ ಕರ್ನಾಟಕದ ರಾಜಕಾರಣಿಗಳು ಕಾವೇರಿಯನ್ನು serious ಆಗಿ ತೆಗೆದುಕೊಂಡಿದ್ದಾರೆಯೇ ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ. ೧೭ ವರ್ಷ ನಡೆದ ನ್ಯಾಯಮಂಡಳಿಯ ಕಲಾಪವನ್ನು ನಮ್ಮ ಸರ್ಕಾರ ಕೂಲಂಕುಶವಾಗಿ follow ಮಾಡಿತ್ತೋ ಇಲ್ಲವೋ ಎಂಬುದೇ ಸಂಶಯಾಸ್ಪದವಾಗಿದೆ. ತೀರ್ಪಿನಲ್ಲಿ ತಮಿಳುನಾಡಿನ ರಾಜಕಾರಣಿಗಳ ಕೈವಾಡವಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಒಂದೊಂತೂ ಖಂಡಿತವಾಗಿಯೂ ಸತ್ಯ, ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ತಮ್ಮ ರಾಜ್ಯ, ತಮ್ಮ ಭಾಷೆ, ತಮ್ಮವರಿಗೆ ಬದ್ದರಾಗಿದ್ದಾರೆ. ತಮಿಳುನಾಡಿಗೋಸ್ಕರ ಅವರು ಏನು ಮಾಡಲೂ ಸಿದ್ದರಾಗಿದ್ದಾರೆ ಎಂಬುದೊಂತೂ ಹಿಂದಿನಿಂದಲೂ ಹಲವಾರು ಬಾರಿ ಸಾಬೀತಾಗಿದೆ. ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು. ನಮ್ಮವರು ಬಿಡಿ, ಹೇಳಿಕೆಗಳನ್ನು, ಆಶ್ವಾಸನೆಗಳನ್ನು ನೀಡುವುದರಲ್ಲಿ ಎತ್ತಿದ ಕೈ !!

ಬಿಡಿ! ಎಲ್ಲವೂ ನಮ್ಮ ಹಣೆಬರಹವೆಂದೆನಿಸುತ್ತದೆ. ಸರಿ, ಇಂದಿನ ಬಂದ್ ಯಾರ ವಿರುದ್ಧ ? ಬೆಳಗಾವಿ ವಿಷಯದಲ್ಲಿ ಕೇಂದ್ರ ಸರ್ಕಾರದ ಕೈವಾಡವಿತ್ತು. ಕಳೆದ ಬಾರಿ ಬಂದ್ ಕೂಡ ಕೇಂದ್ರ ಸರ್ಕಾರದ ವಿರುದ್ಧವಾಗಿತ್ತು. ಅದರಲ್ಲಿ ರಾಜಕೀಯವೂ ಇತ್ತು. ಆದರೆ ಕಾವೇರಿ ವಿಷಯದಲ್ಲಿ ತೀರ್ಪನ್ನು ನೀಡಿರುವುದು ನ್ಯಾಯಾಲಯ. ಬಂದ್ ನ್ಯಾಯಾಲಯದ ವಿರುದ್ಧವೇ ? ನ್ಯಾಯಾಲಯ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳು ನೀಡಿರುವ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ತೀರ್ಪುನ್ನು ನೀಡಿದೆ. ಹಾಗಾದರೆ ಈ ಬಂದ್ ನಮ್ಮ ಸರ್ಕಾರದ ವಿರುದ್ಧವೇ ? ಗೊತ್ತಿಲ್ಲ… ಸರ್ಕಾರ ಈಗಾಗಲೇ ತೀರ್ಪಿನ ಮರು ಪರಿಶೀಲನೆಗೆ ನ್ಯಾಯ ಮಂಡಳಿಯ ಎದುರು ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಇಂದಿನ ಬಂದ್‍ನಿಂದ ಎಲ್ಲರಿಗೂ ಒಂದು ದಿನದ ರಜೆಯೇ ಹೊರತು ಬೇರೆ ಯಾವ ಉದ್ದೇಶವೂ ನನಗೆ ಕಾಣುತಿಲ್ಲ.

ನ್ಯಾಯ ಮಂಡಳಿಯ ಕಡೆಯ ತೀರ್ಪಿನಲ್ಲೂ ಕರ್ನಾಟಕಕ್ಕೆ ನಮಗೆ ಅಗತ್ಯವಿರುವಷ್ಟು ಕಾವೇರಿಯ ನೀರು ಸಿಗುವುದು ಕನಸೇ ! ನಾವು ಕಾವೇರಿಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿಸಿದ್ದೇವೆ. ನಮ್ಮ ನೀರಿನ ಬೇಡಿಕೆಗಳನ್ನು ಕಾವೇರಿಯಿಂದ ಪೂರೈಸಲು ಅಸಾಧ್ಯ. ನಮ್ಮ ನೀರಿನ ದಾಹವನ್ನು ಪೂರೈಸಿಕೊಳ್ಳಲು ಇರುವುದು ಎರಡೇ ಮಾರ್ಗಗಳು. ಒಂದು, ನೀರನ್ನು ಪೋಲು ಮಾಡದಿರುವುದು. ಎರಡು, ಮಳೆಗಾಲದಲ್ಲಿ ಅಣೆಕಟ್ಟಿನಲ್ಲಿರುವ ನೀರನ್ನು ಎಲ್ಲಾ ಕೆರೆ-ಕಟ್ಟೆಗಳಿಗೆ ಹರಿಸಿ ಭರ್ತಿ ಮಾಡಿಕೊಳ್ಳುವುದು. ನಾವು ನಮ್ಮ ಅಣೆಕಟ್ಟುಗಳಿಂದ ಮಳೆಗಾಲದಲ್ಲಿ ಹೆಚ್ಚಾಗಿರುವ ನೀರನ್ನು ನದಿಗೆ ಬಿಟ್ಟು ಬಿಡುತ್ತೇವೆ. ಅದರ ಬದಲು ಹೆಚ್ಚು ಹೆಚ್ಚು ಕೆರೆ-ಕಟ್ಟೆಗಳನ್ನು ಕಟ್ಟಿ ಅವುಗಳಿಗೆ ತುಂಬಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ನೀರಿನ ತಾಪತ್ರಯವನ್ನು ಕಡಿಮೆಯಾಗಿಸಬಹುದು. ಕಳೆದ ಬಾರಿ ಕೃಷ್ಣಾನದಿಯಲ್ಲಿ ಪ್ರವಾಹ ಬಂದಾಗಲೂ ಬಿಜಾಪುರ, ಗುಲಬರ್ಗಾಗಳಲ್ಲಿ ನೀರಿಗಾಗಿ ಪರದಾಡುವುದು ತಪ್ಪಲಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗಿಂತ ಒಂದಿಷ್ಟನ್ನೂ ಹೆಚ್ಚಾಗಿ ಬಿಡದೆ ಶೇಖರಿಸಿಟ್ಟುಕೊಂಡರೆ ನಮ್ಮ ನೀರಿನ ದಾಹವನ್ನು ಸ್ವಲ್ಪವಾದರೂ ನೀಗಿಸಬಹುದು.

ಕಾವೇರಿ ವಿಷಯದಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತು ಸರಿಯಾದ ಸಾಕ್ಷಿ, ಪುರಾವೆ, ಅಂಕಿ-ಅಂಶಗಳನ್ನು ಕೊಟ್ಟು ಕರ್ನಾಟಕಕ್ಕೆ ನ್ಯಾಯವನ್ನು ತಂದು ಕೊಡಲಿ.

ನಮ್ಮ ಸುತ್ತಮುತ್ತಲಿನ ಎಲ್ಲಾ ರಾಜ್ಯಗಳ ಜತೆ ಯಾವುದೇ ವಿಷಯಕ್ಕೂ ಜಗಳವಾಡದೇ ಮತ್ತಿದೇ ಬೇಸರ, ಇದೇ ಏಕಾಂತ ನಮ್ಮ ನಾಡನ್ನು ಎಂದೂ ಕಾಡದಿರಲಿ……..

ಆತಂಕ

ನಾಳೆ ಅಂದರೆ, ಫೆಬ್ರವರಿ ೫ರಂದು ಕಾವೇರಿ ನ್ಯಾಯ ಮಂಡಳಿಯ ಕಾವೇರಿ ನದಿ ನೀರು ಹಂಚಿಕೆಯ ತೀರ್ಪು ಹೊರಬೀಳಲಿದೆ. ೨ ದಶಕಗಳ ವಾದ-ಪ್ರತಿವಾದಗಳ ನಂತರ ಬರಲಿರುವ ತೀರ್ಪು ಕರ್ನಾಟಕ, ತಮಿಳುನಾಡು ಜನರಲ್ಲಿ ಆತಂಕ ಮೂಡಿಸಿದೆ.

ಕಾವೇರಿ ಕರ್ನಾಟಕದ ಮೈಸೂರು ಪ್ರಾಂತ್ಯ ಹಾಗೂ ತಮಿಳುನಾಡಿನ ಜೀವ ನದಿಯಾಗಿದೆ. ಎರಡೂ ರಾಜ್ಯಗಳ ಲಕ್ಷಾಂತರ ಜನರು ಕಾವೇರಿಯನ್ನೇ ನಂಬಿ ಬೇಸಾಯ ಮಾಡುತ್ತಿದ್ದಾರೆ. ಕಾವೇರಿ ನದಿಯ ನೀರಾವರಿಯಿಂದ ಒಂದು ಕಾಲದಲ್ಲಿ ಬರಡಾಗಿದ್ದಂತಹ ಭೂಮಿ ಇಂದು ಭತ್ತದ ಕಣಜಗಳಾಗಿವೆ. ಹಸಿರನ್ನು ಹೊದ್ದುಕೊಂಡಿವೆ.

ಆದರೆ, ಎರಡೂ ರಾಜ್ಯಗಳೂ ಕಾವೇರಿ ನೀರಾವರಿ ಪ್ರದೇಶವನ್ನು ಹೆಚ್ಚಿಸುತ್ತಲೇ ಇವೆ. ಈ ಪ್ರದೇಶಗಳಿಗೆಲ್ಲಾ ನೀರುಣಿಸುವಷ್ಟು ಕಾವೇರಿಯಲ್ಲಿ ನೀರಿದೆಯೇ? ವರ್ಷದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಾದರೆ ಮಾತ್ರ ಕಾವೇರಿ ಕರ್ನಾಟಕ, ತಮಿಳುನಾಡುಗಳ ನೀರಿನ ದಾಹವನ್ನು ತೀರಿಸಬಲ್ಲಳು. ಮಳೆ ಕಡಿಮೆಯಾಯಿತೆಂದರೆ, ಮತ್ತೆ ಎರಡೂ ರಾಜ್ಯಗಳ ಮಧ್ಯೆ ಕಚ್ಚಾಟ. ಇಬ್ಬರೂ ಕಾವೇರಿ ತಮ್ಮ ಹಕ್ಕು ಎಂದು ಕೂಗಾಡುತ್ತಾರೆ. ಕೆಲವೊಮ್ಮೆ ಈ ಜಗಳ ತಾರಕ್ಕೇರಿರುವುದೂ ಉಂಟು. ಇದಕ್ಕೆ ಕೆಲವೊಂದು ಸಾರಿ ರಾಜಕಾರಣಿಗಳೂ ಕಾರಣ. ತಮ್ಮ ತಮ್ಮ ರಾಜ್ಯದ ಜನತೆಗೆ ತಮ್ಮ ನಿಷ್ಠೆಯನ್ನು ತೋರಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ತಾವು ಅಪ್ಪಟ ತಮಿಳು ಹೆಣ್ಣು ಎಂದು ತೋರಿಸಲು ಸುಪ್ರೀಂಕೋರ್ಟಿಗೂ ಹೋಗಿದ್ದಾರೆ.

ಆದರೆ, ಈ ಕಾವೇರಿ ಜಗಳಕ್ಕೆ ನಿಜವಾದ ಕಾರಣವೇನು ? ಮೊದಲೇ ಹೇಳಿದಂತೆ ಹೆಚ್ಚುತ್ತಿರುವ ನೀರಾವರಿ ಪ್ರದೇಶ ಒಂದು ಕಾರಣ. ಇನ್ನೊಂದು ಮುಖ್ಯ ಕಾರಣ, ಎರಡೂ ರಾಜ್ಯಗಳ ನೀರಾವರಿ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯುವುದು. ಮಂಡ್ಯದಲ್ಲಿ ಕಬ್ಬನ್ನೂ ಬೆಳೆಯುತ್ತಾರೆ. ಎರಡೂ ಬೆಳೆಗಳಿಗೂ ಹೆಚ್ಚು ನೀರು ಬೇಕು. ಮಳೆ ಕಡಿಮೆಯಾದರೆ ಹೇಗೆ ತಾನೆ ನೀರು ಸಾಲುತ್ತದೆ ಹೇಳಿ ? ಇದರ ಮೇಲೆ ಎರಡೂ ಕಡೆಯ ಜನರ ಸ್ವಾರ್ಥ. ಕರ್ನಾಟಕದವರು ‘ನಮಗೇ ನೀರು ಸಾಲುವುದಿಲ್ಲ, ನಿಮಗೆ ಎಲ್ಲಿಂದ ಕೊಡುವುದು ನೀರು’ ಎಂದು, ಇನ್ನು ತಮಿಳುನಾಡಿನವರು, ಕರ್ನಾಟಕದಲ್ಲಿ ಮಳೆ ಆಗುತ್ತದೋ ಬಿಡುತ್ತದೋ, ನೀರು ಇದೆಯೋ ಇಲ್ಲವೋ, ‘ನಮಗೆ ನೀರು ಬಿಡಿ’. ಇದು ಸ್ವಾರ್ಥವಲ್ಲದೆ ಮತ್ತೇನು ?

ಕಾವೇರಿ ನಮಗೆ ಸೇರಿದ್ದೆಂದು ಎರಡೂ ರಾಜ್ಯದವರು ಕಚ್ಚಾಡಿದರೆ ಅದಕ್ಕೆ ಪರಿಹಾರವೆಲ್ಲಿ ಸಿಕ್ಕೀತು ? ಕಾವೇರಿ ಪ್ರಕೃತಿಗೆ ಸೇರಿದ್ದು. ಅದನ್ನು ಇಬ್ಬರೂ ಹಂಚಿಕೊಳ್ಳಬೇಕಲ್ಲವೇ ? ಜತೆಗೆ, ಎರಡೂ ರಾಜ್ಯದವರೂ ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಬೆಳೆದರೆ ಕಾವೇರಿಯಲ್ಲಿರುವಷ್ಟು ನೀರು ಸಾಲುತ್ತದೆ. ಹನಿ ನೀರಾವರಿಯನ್ನು ಅನುಸರಿಸಿದರೆ ನೀರಿನ ಬಳಕೆಯೂ ಕಡಿಮೆಯಾಗುತ್ತದೆ.

ಭಾರತದ ಅಂತರ-ರಾಜ್ಯ ಜಗಳಗಳಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಕೇವಲ ತಮ್ಮ ತಮ್ಮ ರಾಜಕೀಯ ಲಾಭದ ಬಗ್ಗೆ ಯೋಚಿಸುವುದೇ ಹೆಚ್ಚು. ಸಮಸ್ಯೆಗಳು ತಣ್ಣಗಾಗುತ್ತವೆಯೇ ಹೊರತು, ಪರಿಹಾರ ಮಾತ್ರ ಕಂಡುಕೊಳ್ಳಲು ಸಾಧ್ಯವೇ ಅಗಿಲ್ಲ. ಭಾರತದ ರಾಜ್ಯಗಳು, ಯುರೋಪಿನ ದೇಶಗಳ ಮಧ್ಯೆ ಹಲವು ಸಮಾನತೆಗಳಿವೆ. ಯುರೋಪಿನಲ್ಲಿ ಕೂಡ ಹಲವು ನದಿಗಳು ಹಲವು ದೇಶಗಳ ಮೂಲಕ ಹರಿಯುತ್ತವೆ. ಆದರೆ ನೀರಿಗಾಗಿ ಜಗಳವಾಡಿರುವುದನ್ನು ನಾನು ಕೇಳಿಯೇ ಇಲ್ಲ. ಹಲವು ಯೋಜನೆಗಳನ್ನು ಸುತ್ತಮುತ್ತಲಿನ ದೇಶಗಳು ಸೇರಿ ಕೈಗೊಂಡಿವೆ. ‘ರೈನ್‘ ಮತ್ತು ‘ಡಾನ್ಯೂಬ್‘ ನದಿಗಳ ಮಧ್ಯೆ ಕಾಲುವೆಯನ್ನು ಸೃಷ್ಟಿಸಿ ‘ನಾರ್ತ್‘ ಸಮುದ್ರದಿಂದ ‘ಬ್ಲಾಕ್‘ ಸಮುದ್ರದವರೆಗೂ ಹಾಯ್ದುಹೋಗಬಹುದಾದಂತಹ ಮಾರ್ಗವನ್ನು ನಿರ್ಮಿಸಿವೆ. ಇವೆಲ್ಲಾ ಯೋಜನೆಗಳು ಪರಸ್ಪರ ಸಹಕಾರವಿಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು ? ನಮ್ಮ ಸರ್ಕಾರಗಳು ಸ್ವಲ್ಪ ರಾಜಕೀಯವನ್ನು ಬದಿಗಿಟ್ಟು, ಪರಸ್ಪರ ಸಹಕಾರವನ್ನು ತೋರಿದ್ದರೆ ಇಂದಿನ ಈ ಆತಂಕ ಎಲ್ಲಿರುತ್ತಿತ್ತು ?

ಭೂಮಿಯ ಈ ದಿನಗಳಲ್ಲಿ ಬರ, ಪ್ರವಾಹ, ಚಂಡಮಾರುತಗಳು ಹೆಚ್ಚಾಗಿವೆ. ಎಲ್ಲೋ ಓದಿದ ನೆನಪು, “ಭಾರತದಲ್ಲಿ ಇನ್ನು ಮುಂದೆ ಮುಂಗಾರು ಮಳೆ ಸಾಮಾನ್ಯವಾಗಿರುವುದಿಲ್ಲ”. ಕಳೆದ ವರ್ಷದಲ್ಲೇ, ಗುಜರಾತ್ ನಲ್ಲಿ ಅತಿವೃಷ್ಟಿಯಾದರೆ, ಅತಿ ಹೆಚ್ಚು ಮಳೆ ಬೀಳುವ ಅಸ್ಸಾಂನಲ್ಲಿ ಬರ. ಪರಿಸ್ಥಿತಿ ಹೀಗಿರುವಾಗ ನಾವು ಮಳೆಯನ್ನು ನಂಬಿ ಬದುಕಿರಲು ಸಾಧ್ಯವೇ ? ಅದರಲ್ಲೂ ಮುಂಗಾರು ಮಳೆಯಿಂದಲೇ ಮೈದುಂಬಿ ಹರಿಯುವ ದಕ್ಷಿಣ ಭಾರತದ ನದಿಗಳನ್ನೇ ನಂಬಿರಲು ಸಾಧ್ಯವೇ ? ಪ್ರಪಂಚದಲ್ಲಿ ಈಗಾಗಲೇ ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳು ದಶಕಗಳ ಹಿಂದೆ ಕಂಡಂತಹ ಬರದಿಂದ ಮತ್ತೆ ತತ್ತರಿಸುತ್ತಿವೆ. ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಆಸ್ಟ್ರೇಲಿಯಾದಲ್ಲಿ ಬಳಸಿದ ನೀರನ್ನು ಮತ್ತೆ ಪರಿಷ್ಕರಿಸಿ ಬಳಸಲಾಗುತ್ತಿದೆ. ಜಕಾರ್ತ ಪ್ರವಾಹದಿಂದ ನರಳುತ್ತಿದೆ. ನಮ್ಮ ರಾಜ್ಯವೂ ಎರಡು ವರ್ಷಗಳ ಹಿಂದೆ ಬರದಿಂದ ನರಳಿತ್ತು. ಕೇವಲ ರೈತರ ಆತ್ಮಹತ್ಯೆ ಸುದ್ದಿಯಾಯಿತೇ ಹೊರತು, ಮುಂದಿನ ಬರದ ದಿನಗಳನ್ನು ಹೇಗೆ ಎದುರಿಸುವುದು ಎಂದು ಯಾರೂ ಯೋಚಿಸಲಿಲ್ಲ. ಕೊಳವೆ ಭಾವಿಗಳನ್ನು ಸಿಕ್ಕಲ್ಲೆಲ್ಲಾ ತೋಡಿ ನೀರನ್ನು ಹೀರುತ್ತಿದ್ದೇವೆ ಅಷ್ಟೆ. ಅಂತರ್ಜಲಕ್ಕೆ ಮತ್ತೆ ನೀರುಣಿಸುವ ಬಗ್ಗೆ ಯೋಚಿಸಿಯೇ ಇಲ್ಲ.

ಹೀಗೇ ಮುಂದೆ ನಡೆದರೆ, ನಮಗೆಲ್ಲಾ ಒಂದು ದೊಡ್ದ ಆಘಾತ ಕಾದಿದೆ. ನಮ್ಮ ಜನರಿಗೆ ಕುಡಿಯುವುದಕ್ಕೂ ನೀರಿರುವುದಿಲ್ಲ.

ಭಾರತೀಯರು ಕೇವಲ ಪೂಜೆ-ಪುನಸ್ಕಾರಗಳಲ್ಲಿ ನೀರು ಅತ್ಯಮೂಲ್ಯವಾದದ್ದು ಎಂದು ಹಾಡಿ ಹೊಗಳುತ್ತಾರೆ ಅಷ್ಟೆ. ನಿತ್ಯ ಜೀವನದಲ್ಲಿ ನೀರಿನ ಬಳಕೆಯ ಬಗ್ಗೆ ಅತ್ಯಲ್ಪ ಕಾಳಜಿಯನ್ನೂ ತೋರುವುದಿಲ್ಲ. ನೀರಿನ ಮಹತ್ವ, ಅದು ಇಲ್ಲದಿರುವಾಗಲೇ ಅರಿವಾಗಬೇಕೆ ?

ಮುಂದೆ ಏನೋ, ಹೇಗೋ ಎಂಬ ಆತಂಕ.

ಕನ್ನಡ ರತ್ನಕೋಶ

ನಾನು ಪ್ರೌಢಶಾಲೆಯಲ್ಲಿದ್ದಾಗ ಪತ್ರಿಕೋದ್ಯಮ ಸಂಘದ ಸದಸ್ಯನಾಗಿದ್ದೆ. ಅಲ್ಪ-ಸ್ವಲ್ಪ ಲೇಖನ, ಪ್ರಬಂಧ, ವ್ಯಂಗ್ಯ ಚಿತ್ರ ಬರೆಯುವುದು, ಆ ಸಂಘದ ಚಟುವಟಿಗೆಗಳಲ್ಲಿ ಸೇರಿದ್ದವು. ಪ್ರತಿ ವರ್ಷವೂ ನವೆಂಬರ್ 14ನೇ ತಾರೀಖಿನಿಂದ 20ನೇ ತಾರೀಖಿನವರೆಗೆ ಆಚರಿಸಲಾಗುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪತ್ರಿಕೋದ್ಯಮ ಸಂಘದ ವತಿಯಿಂದ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು. ಆಗಲೇ ನನ್ನ ಕೈಗೆ ಸಿಕ್ಕ ಪುಸ್ತಕ ‘ಕನ್ನಡ ರತ್ನಕೋಶ’.


‘ಕನ್ನಡ ರತ್ನಕೋಶ’ವು ಕನ್ನಡ-ಕನ್ನಡ ನಿಘಂಟಿನ ಒಂದು ಸಂಕ್ಷಿಪ್ತವಾದ ರೂಪ. ಒಂದು ಕೈಪಿಡಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರತ್ನಕೋಶವನ್ನು ಪ್ರಕಾಶಿಸುತ್ತದೆ. ಜತೆಗೆ ಇದರ ಬೆಲೆ ಕೇವಲ ಐದು ರೂಪಾಯಿ !!! ಪ್ರತಿಯೊಬ್ಬ ಕನ್ನಡಿಗನ ಕೈಗೂ ಈ ಪುಸ್ತಕ ಸೇರಲಿ ಎಂಬ ಉದ್ದೇಶದಿಂದ ಇದರ ಬೆಲೆಯನ್ನು ಎಲ್ಲರ ಕೈಗೆ ಎಟುಕುವಂತೆ ಇರಿಸಲಾಗಿದೆ. ಆದರೆ ‘ಕನ್ನಡ ರತ್ನಕೋಶ’ದಲ್ಲಿರುವ ಜ್ಞಾನ ಭಂಡಾರ ಮಾತ್ರ ಅಪಾರ. ಎಷ್ಟೋ ಕೇಳೇ ಇಲ್ಲದ ಕನ್ನಡದ ಪದಗಳನ್ನು ರತ್ನಕೋಶದಲ್ಲಿ ಕಾಣಬಹುದು. ನಾನು ಕನ್ನಡ ಪದಬಂಧಗಳನ್ನು ಭರ್ತಿಮಾಡುವುದರಲ್ಲಿ ರತ್ನಕೋಶದ ಪಾತ್ರವೇ ಹೆಚ್ಚು.

ರತ್ನಕೋಶ ಕೇವಲ ಕನ್ನಡ-ಕನ್ನಡ ನಿಘಂಟಲ್ಲ, ಅದರಲ್ಲಿ ಕರ್ನಾಟಕ ಬಗ್ಗೆ ಹಲವು ಮಾಹಿತಿಯನ್ನು ನೀಡಲಾಗಿದೆ. ಭಾರತೀಯ ಸಂವತ್ಸರಗಳ, ರಾಶಿಗಳ, ನಕ್ಷತ್ರಗಳ ಹೆಸರುಗಳ ಪಟ್ಟಿಯನ್ನೂ ನೀಡಲಾಗಿದೆ. ಅದರ ಜತೆಗೆ ಜಗತ್ತಿನ ರಾಷ್ಟ್ರಗಳ ಹೆಸರುಗಳು, ಅವುಗಳ ರಾಜಧಾನಿಗಳನ್ನು ನೀಡಲಾಗಿದೆ.

ಕನ್ನಡ ರತ್ನಕೋಶವು ಕನ್ನಡದ ಜ್ಞಾನವನ್ನು ಹೆಚ್ಚಿಸುತ್ತದೆಯಲ್ಲದೇ, ಕನ್ನಡದ ಮೇಲೆ ಇನ್ನೂ ಹೆಚ್ಚಿನ ಅಭಿಮಾನವನ್ನು ಮೂಡಿಸುತ್ತದೆ. ಕನ್ನಡ ರತ್ನಕೋಶ ಪ್ರತಿಯೊಬ್ಬ ಕನ್ನಡಿಗನೂ ಸದಾ ತನ್ನ ಜತೆ ಇಟ್ಟುಕೊಳ್ಳಬೇಕಾದ ಒಂದು ಕೈಪಿಡಿ.

‘ಕೈ ಕೆಸರಾದರೆ ಬಾಯಿ ಮೊಸರು’

Reservation’ – ಈಗ ನಮ್ಮ ದೇಶದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಪದ ಅನ್ನಿಸುತ್ತೆ. ನಾನು ಇಲ್ಲಿ ಹೇಳ ಹೊರಟಿರುವುದು ಆ ‘Reservation’ ಅಲ್ಲಾ !!!! ಅದರ ಬಗ್ಗೆ ಬರಿಯೋದಕ್ಕೆ ಶುರು ಮಾಡಿದ್ರೆ ನನ್ನ ಜೀವನ ಪೂರ್ತಿ ಬರೆಯಬಹುದು ಅನ್ನಿಸುತ್ತೆ !!!

ನಾನು ಇಲ್ಲಿ ಹೇಳೋ ‘Reservation’, ನಮ್ಮ ಬಸ್, ರೈಲುಗಳಲ್ಲಿ ಮಾಡೋ ‘ಮುಂಗಡ ಸೀಟು ಕಾಯ್ದಿರಿಸುವುದು’ !!

ಮೊನ್ನೆಯ ದೀಪಾವಳಿಗೆ ಊರಿಗೆ ಹೋಗಲು ಹಾಸನದ ಬಸ್ಸಿಗೆ Reserve ಮಾಡಿಸಿದ್ದೆ. ಹಬ್ಬದ ದಿನಗಳ ಹಿಂದಿನ ದಿನ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಭಾರಿ ಜನ ಜಂಗುಳಿ ಇರುತ್ತದೆ. ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೊರಟಿರುತ್ತಾರೆ. Reserve ಮಾಡಿಸಿದರೆ ಬಸ್‍ನಲ್ಲಿ ಸೀಟು ಹಿಡಿಯುವುದು ತಪ್ಪುತ್ತದೆ.

ಆದರೆ ಹಬ್ಬದ ಹಿಂದಿನ ದಿನ ಬೆಂಗಳೂರಿನಿಂದ ಹೊರಡುವವರಿಗೆ ‘Reservation’ ನ್ನಿನ ಇನ್ನೊಂದು ಮುಖ ಗೊತ್ತಿರುತ್ತದೆ. ಆ ಇನ್ನೊಂದು ಮುಖ Majestic ನಲ್ಲಿ ಆಗೋ ‘Traffic Jam’ !!!!! ನಾನು ಈ ಬಾರಿಯೂ ಇದನ್ನು ಎದುರಿಸಬೇಕಾಯಿತು. ನನಗೆ ಇದು ಮೂರನೇ ಬಾರಿ. ಈ ಬಾರಿ J C Road ನಿಂದ ಬಸ್ ನಿಲ್ದಾಣದವರೆಗೂ ಪೂರ್ತಿ ‘Traffic Jam’. ಪ್ರತಿ ಬಾರಿಯೂ ಆಗುವ ಈ ‘Traffic Jam’ ಗೆ ಕಾರಣ ಇನ್ನೂ ಗೊತ್ತಾಗಿಲ್ಲ. ಇದರ ಮೇಲೆ ಮಾಡಿಸಿರುವ ‘Reservation’ ಬೇರೆ !!! ಪ್ರತಿ ಕ್ಷಣವೂ ಆತಂಕ, ಎಲ್ಲಿ ಬಸ್ ಹೊರಟು ಹೋಗುತ್ತದೋ ಅಂತ. J C Road ನಲ್ಲೇ ನನಗೆ ಆತಂಕ ಶುರು ಆಗಿತ್ತು. ಬಸ್ ಹೊರಡುವುದಕ್ಕೆ ಕೇವಲ 30 ನಿಮಿಷಗಳಿದ್ದವು. ಬಸ್ಸಿನಿಂದ ಇಳಿದು ಬೇರೆ ದಾರಿಯಲ್ಲಿ ಆಟೋನಲ್ಲಿಯಾದರೋ ಹೋಗೋಣವೆಂದರೆ ಅಲ್ಲೂ ‘Traffic Jam’ ಆಗಿದ್ದರೆ ಎಂಬ ಯೋಚನೆ!!

ಕೇವಲ ಅರ್ಧ ಗಂಟೆ ಇತ್ತು. ಇನ್ನು ಸಿಟಿ ಬಸ್ ನಲ್ಲೇ ಹೋಗಿ ಊರಿಗೆ ಬಸ್ ಹಿಡಿಯುವುದು ಕನಸು, ಎಂದು ಅನಿಸಿತು. ಸಿಟಿ ಬಸ್ ನಿಂದ ಇಳಿದು ನಡೆದೇ ಬಸ್ ನಿಲ್ದಾಣಕ್ಕೆ ಹೊರಟೆ. ಒಂದು ವಿಚಿತ್ರವೇನೆಂದರೆ, ಬೀದಿಯಲ್ಲಿ ವಾಹನಗಳೆಲ್ಲಾ ಹಾಗೇ ನಿಂತಿದ್ದವು. ರಸ್ತೆ ಬದಿಯಲ್ಲಿ ಜನ ಬಸ್ ನಿಲ್ದಾಣಕ್ಕೆ ಆತಂಕದಿಂದ ದೌಡಾಯಿಸುತಿದ್ದರು. ನಾನೂ ಆತಂಕದೊಡನೆಯೇ ಬಸ್ ನಿಲ್ದಾಣಕ್ಕೆ ಓಡುತ್ತಾ ನಡೆದೇ ಹೋದೆ.

ಆದರೆ ‘Reservation’ ಮಾಡಿಸದೇ ಇದ್ದರೆ ಆರಾಮಾಗಿ ಹೋಗಬಹುದಿತ್ತು. ಆ ಆತಂಕ ಇರುತಿರಲಿಲ್ಲ. 2 km ನಡೆದು ಹೋಗುವುದು ತಪ್ಪುತ್ತಿತ್ತು. ಹಾಗಾದರೆ ‘Reservation’ ಒಂದು ಫಜೀತಿಯಲ್ಲವೇ ? ಆ ಬಸ್ಸಿನ ಸಮಯಕ್ಕೇ ಸರಿಯಾಗಿ ಹೋಗಬೇಕು. ಆ ಬಸ್ ಹೋಯಿತು ಅಂದರೆ ಹಣವನ್ನು ಕೂಡ ಕಳೆದು ಕೊಳ್ಳಬೇಕಾಗುತ್ತದೆ. ಆದರೆ ಬಸ್ ನಿಲ್ದಾಣವನ್ನು ಕಷ್ಟ ಪಟ್ಟು ತಲುಪಿ ಬಸ್ ನಲ್ಲಿ ನನ್ನ ಸೀಟಿನಲ್ಲಿ ಕೂತು, ಊರಿಗೆ ಸುಖವಾಗಿ ಹೋಗುವಾಗ ಸಿಗುವ ಸಮಾಧಾನ, ನನಗೆ ಈ ಸಾಲನ್ನು ನೆನಪಾಗುತ್ತಿದೆ – ‘ಕೈ ಕೆಸರಾದರೆ ಬಾಯಿ ಮೊಸರು’, ಎಷ್ಟು ನಿಜವಲ್ಲವೇ !!!!

ಕನ್ನಡ – ಕನ್ನಡಿಗ

ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ ೧ ಬಂದಿತು. ನಾವು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದೆವು. ಈ ಬಾರಿಯ ರಾಜ್ಯೋತ್ಸವಕ್ಕೆ ಸುವರ್ಣ ವರ್ಷಾಚರಣೆಯ ಗರಿ ಕೂಡ. ಹಾಗಾಗಿ ಈ ಬಾರಿಯ ರಾಜ್ಯೋತ್ಸವ ಇನ್ನೂ ಸ್ವಲ್ಪ ಹೆಚ್ಚಿನ ಅದ್ಧೂರಿತನದಿಂದ ಕೂಡಿತ್ತು. ಶಾಲೆಯಲ್ಲಿದ್ದಾಗ, ಹಾಸ್ಟೆಲ್ ನಲ್ಲಿ ಇದ್ದಾಗ ನಡೆಯುತ್ತಿದ್ದ ಆಚರಣೆ ಅಂದರೆ – ಕರೆಸುತ್ತಿದ್ದ ಅತಿಥಿಗಳಿಂದ ಕನ್ನಡ ಧ್ವಜಾರೋಹಣ, ನಾನೂ ಕೂಡ ಕೆಲವು ಕನ್ನಡದ ಹಾಡುಗಳನ್ನು ಹೇಳುತ್ತಿದ್ದೆ, ಕೆಲವರಿಂದ ಅದೇ ಭಾಷಣಗಳ ಪುನರಾವರ್ತನೆ, ನಂತರ ಸಿಹಿ ತಿನಿಸು !!!! ಅಷ್ಟೆ.

ಆದರೆ ಈ ಬಾರಿ ಅದೇಕೋ ಹತ್ತು ಹಲವು ಆಲೋಚನೆಗಳು ನನ್ನನ್ನು ಕಾಡುತ್ತಿವೆ. ಕನ್ನಡ, ಕರ್ನಾಟಕ, ಭಾಷಾಭಿಮಾನ …..


ಇಂದಿನ ಕನ್ನಡ ದಿನ ಪತ್ರಿಕೆಗಳು ಕರ್ನಾಟಕಮಯ. ಇಂಗ್ಲೀಷ್ ಪತ್ರಿಕೆಗಳಲ್ಲಿಯೂ ಸುವರ್ಣ ರಾಜ್ಯೊತ್ಸವದ ಬಗ್ಗೆ ವಿಶೇಷ ಲೇಖನಗಳು. ನೋಡಿ ಬಹಳ ಸಂತೋಷವಾಯಿತು. ಪತ್ರಿಕೆಗಳಲ್ಲಿ ಕರ್ನಾಟಕದ ವೈಶಿಷ್ಟ್ಯ, ಕನ್ನಡದ ಇತಿಹಾಸ, ಕನ್ನಡಿಗರ ಸಾಧನೆಗಳ ಬಗ್ಗೆ ಲೇಖನಗಳಿವೆ. ಕರ್ನಾಟಕ ಹೇಗೆ ಉದಯವಾಯಿತು ಎಂದು ಓದಿ ಆಶ್ಚರ್ಯವೂ ಆಯಿತು. ನಮ್ಮ ಶಾಲೆಯ ಸಮಾಜ ವಿಜ್ಞಾನದಲ್ಲಿ ಉಲ್ಲೇಖಿಸುವ ಭಾರತದ ಇತಿಹಾಸ ಭಾರತ ಸ್ವಾತಂತ್ರ್ಯಕ್ಕೆ ಬಂದು ನಿಲ್ಲುತ್ತದೆ. ನನಗೆ ಈಗಲೂ ಕೂಡ ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ನಡೆದ ಘಟನೆಗಳು ಸರಿಯಾಗಿ ಗೊತ್ತಿಲ್ಲ. ನಮ್ಮ ದೇಶದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಹೇಗಾಯಿತು ಎಂಬುದೂ ಗೊತ್ತಿಲ್ಲ. ಹಾಗಾಗಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರು ತಿಳಿದಿಲ್ಲ. ಇನ್ನು ಮುಂದೆಯಾದರೋ ದೇಶದ ಇತಿಹಾಸದ ಜತೆಗೆ ರಾಜ್ಯದ ಇತಿಹಾಸವನ್ನು ಶಾಲೆಗಳಲ್ಲಿ ಕಲಿಸಲಿ. ಚಿಕ್ಕವರಾಗಿದ್ದಾಗಿಂದಾಗಲೇ ಕರ್ನಾಟಕ, ಕನ್ನಡದ ಮೇಲೆ ಅಭಿಮಾನ ಮೂಡುತ್ತದೆ.

ಕರ್ನಾಟಕಕ್ಕೆ ೨೦೦೦ಕ್ಕೂ ಮೀರಿದ ಇತಿಹಾಸ ಇದ್ದರೂ, ಸ್ವತಂತ್ರ ಭಾರತದಲ್ಲಿ ಕರ್ನಾಟಕ ರಾಜ್ಯ ಉದಯಿಸಿ ೫೦ ವರ್ಷಗಳಾದವು. ಕರ್ನಾಟಕ ಈ ೫೦ ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧಿಸಿದೆ, ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಆದರೆ ಈ ೫೦ ರ ಹೊಸ್ತಿಲಲ್ಲಿರುವ ಕರ್ನಾಟಕದ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಎಲ್ಲಕ್ಕಿಂತ ಆತಂಕ ಹುಟ್ಟಿಸುವುದು ಕರ್ನಾಟಕದಲ್ಲಿ ಕನ್ನಡದ ಸ್ಥಾನ ಮಾನ. ಈಗಿನ ಮಕ್ಕಳ, ಅದರಲ್ಲೂ ಅವರ ತಂದೆ-ತಾಯಂದಿರ ಇಂಗ್ಲೀಷ್ ವ್ಯಾಮೋಹ ನಿಜವಾಗಲೂ ಕನ್ನಡದ ಭವಿಷ್ಯದ ಬಗ್ಗೆ ಭಯ ಹುಟ್ಟಿಸುತ್ತದೆ. ಕನ್ನಡಿಗರೇ ಕನ್ನಡದ ಬಗ್ಗೆ ಒಲವು ತೋರದಿದ್ದರೆ ಬೇರೆಯವರು ತೋರುತ್ತಾರೆಯೇ? ಕನ್ನಡಿಗರಿಗೇ ಇಂದು ಸರಿಯಾಗಿ ಕನ್ನಡ ಬರುವುದಿಲ್ಲವೆಂದರೆ ದುಃಖದ ವಿಷಯ. ಮಕ್ಕಳಿಗೆ ಕನ್ನಡಕ್ಕಿಂತ ಮೊದಲು ಇಂಗ್ಲಿಷ್ ಹೇಳಿ ಕೊಡುವ ತವಕ. ಬಣ್ಣಗಳ ಹೆಸರುಗಳನ್ನೂ ಕೇವಲ ಇಂಗ್ಲೀಷಿನಲ್ಲಿಯೇ ಹೇಳಿ ಕೊಡುತ್ತಾರೆ. ನಿಜ, ಈಗ ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲೀಷ್ ಬೇಕು. ಆದರೆ ಕನ್ನಡ ಬೇಡವೇ ಬೇಡವೆ ? ಏಕೆ ಹೀಗೆ ? ಇದು ಕೇವಲ ಕನ್ನಡ ಎದುರಿಸುತ್ತಿರುವ ಸವಾಲೇ ? ಅಥವಾ ಇಂಗ್ಲೀಷ್ ವಿಶ್ವ ವ್ಯಾಪಿಯಾಗಿರುವುದರಿಂದ ಬೇರೆ ಭಾಷೆಗಳೂ ಇದೇ ಸವಾಲನ್ನು ಎದುರಿಸಿತ್ತಿವೆಯೇ? ಆದರೆ ಎಲ್ಲೂ ಮಾತೃಭಾಷೆಯನ್ನು ಬಿಟ್ಟು ಇಂಗ್ಲೀಷ್ ಅನ್ನು ಕಲಿಯ ಹೊರಟಿರುವುದು ಇದೇ ಮೊದಲು ಎಂದೆನಿಸುತ್ತಿದೆ. ಇದೇ ಕಾರಣದಿಂದಾಗಿ ಈಗಿನ ಮಕ್ಕಳಿಗೆ ಕನ್ನಡದ ಬಗ್ಗೆ ವ್ಯಾಮೋಹವೇ ಇಲ್ಲ. ಕನ್ನಡವನ್ನು ಓದುವುದೆ, ಕನ್ನಡದಲ್ಲಿ ಮಾತನಾಡುವುದು ಕೀಳುಮಟ್ಟದೆಂದುಕೊಂಡಿದ್ದಾರೆ. ಕನ್ನಡ ಪತ್ರಿಕೆಗಳನ್ನಂತೂ ಓದುವುದೇ ಇಲ್ಲ. ಇವಿಷ್ಟೂ ಕನ್ನಡಿಗರ ಮನೆಯಲ್ಲೇ ಆಗುತ್ತಿದೆ.ಹೀಗಿರುವಾಗ ನಾವು ಬೆಂಗಳೂರಿನ ಪರಭಾಷಿಕರಿಗೆ ಕನ್ನಡ ಕಲಿಯಿರಿ ಎಂದು ಯಾವ ಮುಖವನ್ನಿಟ್ಟುಕೊಂಡು ಹೇಳಬೇಕು ???

ಇನ್ನು ಬೆಂಗಳೂರಿನ ವಿಷಯಕ್ಕೆ ಬಂದರೆ, ಭೀತಿ ಹುಟ್ಟುತ್ತದೆ. ಬೆಂಗಳೂರಿನ ಕನ್ನಡಿಗರಿಗೆ ಸ್ವಲ್ಪ ಇಂಗ್ಲೀಷಿನ ವ್ಯಾಮೋಹ ಸ್ವಲ್ಪ ಹೆಚ್ಚೇ. ಕೆಲವೊಮ್ಮೆ “ಇಂಗ್ಲೀಷ್ ಭಾಷೆಯ ಮಧ್ಯೆ ಕನ್ನಡ” ಸೇರಿಸಿದಂತೆ ಭಾಸವಾಗುತ್ತದೆ. ಅಚ್ಚ ಕನ್ನಡದಲ್ಲಿಯೇ ಅಣ್ಣ, ಅಕ್ಕ, ತಂದೆ, ತಾಯಿ ಎಂಬ ಮುದ್ದಾದ ಪದಗಳಿದ್ದರೂ ಇವುಗಳಿಗೂ ಇಂಗ್ಲೀಷಿನ ಮೊರೆ ಹೋಗಬೇಕೆ ? ಇದು ತೀರ ಅತಿಯಾಯಿತಲ್ಲವೆ? ಏಕೆ ಹೀಗಾಗುತ್ತಿದೆ. ಇಂಗ್ಲೀಷ್ ನಲ್ಲಿ ಮಾತನಾಡಿದರೆ ಘನತೆ ಹೆಚ್ಚು ಎಂದುಕೊಂಡಿದ್ದಾರೆ.

ಕನ್ನಡಿಗರು ಕರ್ನಾಟಕದ ರಾಜಧಾನಿಯಲ್ಲಿ ಇರುವುದು ಕೇವಲ ೩೦% ?? ಬೆಂಗಳೂರು ಕರ್ನಾಟಕ ಗಡಿಯಲ್ಲಿದೆ ಹೌದು. ಹಾಗೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದಿರುವವರ ಸಂಖ್ಯೆಯೂ ಹೆಚ್ಚು. ಆದರೆ ತಮಿಳುನಾಡಿನ ಚೆನ್ನೈ ಕೂಡ ಗಡಿಭಾಗದಲ್ಲೇ ಇದೆ. ಅಲ್ಲೂ ಕೂಡ ತೆಲುಗು, ಕನ್ನಡಿಗರು, ಮಲಯಾಳಿಗಳ ಸಂಖ್ಯೆ ಹೆಚ್ಚೇ. ಆದರೆ ಅವರೆಲ್ಲರೂ ತಮಿಳನ್ನು ಅಪ್ಪಿಕೊಂಡಿದ್ದಾರೆ. ಅದೇ ತೆಲುಗು, ಮಲಯಾಳಿ, ತಮಿಳಿನವರು ಬೆಂಗಳೂರಿನಲ್ಲಿ ಏಕೆ ಕನ್ನಡವನ್ನು ಅಪ್ಪಿಕೊಂಡಿಲ್ಲ? ಏಕೆ ಈ ವಿಪರ್ಯಾಸ. ಇದಕ್ಕೆಲ್ಲಾ ನಾವು ‘ಕನ್ನಡಿಗರ ವಿಶಾಲ ಮನೋಭಾವ’ ಎಂಬಿತ್ಯಾದಿ ವಿವರಣೆಗಳನ್ನು ಕೊಟ್ಟು ಸುಮ್ಮನಾಗುತ್ತೇವೆ. ಕನ್ನಡಿಗರೇ ಕನ್ನಡ ಭಾಷೆಯನ್ನಾಡಲು ಕೀಳರಿಮೆ ಪಟ್ಟರೆ, ಬೇರೆಯವರು ಕನ್ನಡವನ್ನು ಕಲಿಯಲು ಪ್ರಯತ್ನಿಸಿಯಾರೆ ?

ಈ ಎಲ್ಲಾ ಪ್ರಶ್ನೆಗಳಿಗೆ ಮೂಲ ಕಾರಣ ಕನ್ನಡಿಗರಿಗೆ ಕನ್ನಡದ ಮೇಲಿನ ‘ನಿರಭಿಮಾನ‘. ಹೌದು ನಿರಭಿಮಾನ. ಈಗಿನ ಮಕ್ಕಳ ಇಂಗ್ಲೀಷ್ ವ್ಯಾಮೋಹ ನೋಡಿದರೆ ಎಲ್ಲಿ ೨೦೦೦ ವರ್ಷಗಳಿಂದ ಉರಿಯುತ್ತಿರುವ ಕನ್ನಡದ ದೀಪ ಮುಂದೆ ಆರಿಹೋಗುತ್ತದೋ ಎಂದು ಆತಂಕವಾಗುತ್ತದೆ. ಕನ್ನಡದ ದೀಪ ಮುಂದೆಯೂ ಸದಾ ಉರಿಯುತ್ತಿರಲು ಬೇಕಾಗಿರುವುದು ಇಷ್ಟೆ – ಕನ್ನಡದ ಮೇಲಿನ ಪ್ರೀತಿ, ಅಭಿಮಾನ. ಅಷ್ಟೆ !! ಕನ್ನಡವಿಲ್ಲದಿದ್ದರೆ – ಕನ್ನಡಿಗ ಪದಕ್ಕೆ ಅರ್ಥವಿದೆಯೇ? ಕನ್ನಡವಿರುವವರೆಗಷ್ಟೇ ಕನ್ನಡಿಗನಿರಲು ಸಾಧ್ಯ!!

ನಂಬ್ಡೇವಾಳ್ಳಕ್ಕೆಲ್ಲಾ…..

ನಾ ಬ್ಲಾಗ್ ಅಳ್ದಕ್ ಶುರು ಪಣ್ಣಿ ಒರು ಮಾಸು ಅಚ. ಇಂಗ್ಲೀಷುಳ್ಳೇ, ಕನ್ನಡಾತ್ಲೇ ಅಳ್ದಿರಾಣಿ. ಆನಾಕ ನಾ ಇಂಡೇನು ನಂಬ್ಡೇ ವಾರ್ತೆ ಸಂಕೇತೀಲೇ ಅಳ್ದಮ ಅಂಟ. ಇದೇ ಮೊದ್ಲಾ ವಾರಿ ನಂಬ್ಡೇ ವಾರ್ತೇಲೆ ಅಳ್ದಾಂಡಕರ್ದ್. ಸ್ವಲ್ಪು ಕಷ್ಟಮೇಯೇ ಅಳ್ದರ್ದ್ ನಂಬ್ಡೆ ವಾರ್ತೆಯಾ !!! ಸಂಕೇತಿ ಸಂಗಮತ್ಲೇ ಸಂಕೇತಿ ಓದರ್ದೇ ಕಷ್ಟು. ಪಾರಮ ಇತ್ತ ಅಳ್ದಿ ಮೇಲೆ ಓದಕ್ಕಾಹಂದ ಅಂಟಿ.

ಲ್ಲೆ ಸಂಕೇತಿ ಎನಕ್ಕ ಹೆಂಬ ನಾಳೆ ಅಣ್ಣು ಒರು ವಿಚಾರು ಎನ್ ಮನ್ಸುಳ್ಳೇ ರಾಂದ. ನಂಬ್ಡೇ ವಾರ್ತೆ ನಂಬ್ಡೇವಳ್ಳಕ್ಕೇ ಸರಿಯಾ ವರಲ್ಲಾ ಇಪ್ಪೊ. ಕರ್ನಾಟಕತ್ಲೇ ಇಂದ್ ವಾಳ್ಳಕ್ ಇಪ್ಪೊ ಕನ್ನಡತ್ಲೇ ವರ್ಚೊಲ್ಲಿ, ನಮ್ಡೇ ವಾರ್ತೆಯೇ ಮರಂದ್ ಪೋಹರಪ್ಡಿ ಆಹಾಡ್ರಾಂದ್. ಹೆಂಬ ಜನು ಹಾತುಳ್ಳೂ ಕನ್ನಡಾತ್ಲೇ ವಾರ್ಚೊಲ್ಲನ. ಇಪ್ಪೊದೇತೆ ಪಶ್ಶಾಳ್ಳಕ್ ಸಂಕೇತಿತೆ ಹೆಂಬ ಪದಂಗ್ಳೆ ಗೊತ್ತಿಲ್ಲ. ಇಪ್ಪೊ ನಾ ಅಳ್ದಾಂಡಿಕ್ಕರ್ತ್ಲೆಯೇ ಸಂಕೇತಿ ಪದಂಗ ಇಂದಾಲೂ ಅದ್ ತೆರಿಯಾದೆ ಕನ್ನಡತ್ತೇ ಪದತ್ಯೇ ಉಪ್ಯೋಗಿಚ್ಚಿಕ್ಲ. OrkutCommunity ಲೆ ಪಾರ್ತಾಕ, ಹೆಂಬ ಜನು, ಸಂಕೇತಿ ವರ್ಚೊಲ್ಲಕ್ ವರಲ್ಲ, ಅರ್ಥ್ಮಾಹಂದ್ ಅಂಟ್ ಅಳ್ಡಿರಾನ.

ಎನಕ್ಕೊಂತೂ ಇತ್ಯೆಲ್ಲಾ ಪಾತಾಕ ಹೆಂಬ ಭಯಮೇ ಆಹಂದ್. ನಂಬ್ಡೇ ವಾರ್ತೆಯೇ ನಂಬ್ಳೆಲ್ಲಾ ಮರ್ವಾಂಡ್ ರಾಣು ಅಂಟ. ಎಂಗಡೆ ಅಮ್ಮು, ಅಣ್ಣ್ನಕ್ ಇಕ್ಕರ್ ಸಂಕೇತಿತೆ Vocabulary ಎನ್ನಿಕ್ಕಿಲ್ಲ. ಇಪ್ಪ್ಡಿಯೇ ಆನಾಕ ಮುಂತಿ ತೇಹ್ಡೆ ಸಂಕೇತಿ ವಾರ್ತೆಲೆ ಹೆಂಬ ಕನ್ನಡಾಮೇ ಆಯ್ಪೋಹಂದ್ ಅಂಡಾ ?

ಅತ್ತಿಕ್ ನಂಬ್ಡೇವಾಳ್ಳೆಲ್ಲಾ ಇಪ್ಪೊ ಶೇರ್ಕಿಂಡ್ ಸಂಕೇತಿಕ್ ಒರು ಪುನರ್ಜನ್ಮುತ್ತಾ ಕುಡಣ್ಮಾಯ್ರಾಂದ್. ಇಸ್ರೇಲುಳ್ಳೆ ಹಿಬ್ರುಕ್ ಪುನರ್ಜನ್ಮು ಕುಡ್ತುಡಿ ನಂಬ್ಳೂ ಪಣ್ಣಣ್ಮಾಯ್ರಾಂದ್. ನಂಬ್ಡೇವಾಳ್ಳಕ್ ನಂಬ್ಡೇ ವಾರ್ತೆತೆ ಜ್ಞಾನತ್ತ ಹೆಚ್ ಪಣ್ಣಣ್ಮಾಯ್ರಾಂದ್. ಇತ್ತಿಕ್ಕೆಲ್ಲಾ ನಂಬ್ಡೇ ‘ಸಂಕೇತಿ ಸಂಗಮ’ಮೇ ಒರು ವೇದಿಕೆ ಆಹಲ್ಲಾ ಅಂಡಾ? ಪ್ರತಿ ವಾರಿಯೂ ಎಲ್ಲಾರುಕ್ಕೂ ಮರಂದ್ ಪೋಇಕ್ಕರ್ ಪದಂಗ್ಳ ಕುಡ್ತಾಕ ಎಲ್ಲಾರುಕ್ಕೂಮೆ ಸಂಕೇತಿತೆ Vocabulary ಹೆಂಬಾ ಆಹಂದ್. ಮುಂತಿಕೂಮೆ ಸಂಕೇತಿ ಇರಂದ್.

ಜಗ್ಗತ್ತುಳ್ಳೆ ಕೆಲ್ವೇ ಕೆಲ್ವು ಭಾಷಾ ಅತ್ತತ್ತೆ ಮೂಲತ್ತ ಉಟ್ಟ್ ತಾನಾಯ್ಟೆ ವಳಂಜರಾನ. ನಂಬ್ಡೇ ಸಂಕೇತಿಯೂ ಅತ್ತುಳ್ಳೆ ಒಂಡು. ಅತ್ತ ಮರ್ವಾದೆ ವಳ್ವಿಚ್ಕರ್ದು ನಂಬ್ಡ್ ಮೇಲೆ ರಾಂದ್ ಅಂಡಾ ??

ಕಲಿಯುಗದಲ್ಲಿ ಕಲ್ಕಿ ಎಲ್ಲಿ ???

ನಾನು ಈ ಸಾಲುಗಳನ್ನು ಎಲ್ಲೋ ಓದಿದೆ.

ಕೃತಯುಗದಲ್ಲಿ ಧರ್ಮ-ಅಧರ್ಮಗಳು ಬೇರೆ ಬೇರೆ ಲೋಕದಲ್ಲಿದ್ದವು
ತ್ರೇತಾಯುಗದಲ್ಲಿ ಧರ್ಮ-ಅಧರ್ಮಗಳು ಬೇರೆ ಬೇರೆ ದೇಶಗಳಲ್ಲಿದ್ದವು
ದ್ವಾಪರಯುಗದಲ್ಲಿ ಧರ್ಮ-ಅಧರ್ಮಗಳು ಒಂದೇ ಕುಟುಂಬದಲ್ಲಿದ್ದವು.
ಕಲಿಯುಗದಲ್ಲಿ ಧರ್ಮ-ಅಧರ್ಮಗಳು ಒಬ್ಬರಲ್ಲೇ ಇವೆ !!

ಆ ವಿಷ್ಣು ಈ ಜಗತ್ತಿನ ಪ್ರತಿಯೊಬ್ಬರಲ್ಲೂ ಕಲ್ಕಿಯಾಗಿ ಯಾವಾಗ ಅವತರಿಸುತ್ತಾನೋ ನಾ ಕಾಣೆ……

ಬಂದ್ !!!

ಅಕ್ಟೋಬರ್ 4ನೇ ತಾರೀಖು ಕರ್ನಾಟಕ ಬಂದ್ ನಡೆಯಿತು. ಸಂಪೂರ್ಣ ಯಶಸ್ವಿ ಕೂಡ ಅಯಿತು. ಆದರೆ ಬಂದ್ ಮಾಡಿದ ಉದ್ದೇಶಗಳು ಈಡೇರುತ್ತದೋ ಇಲ್ಲವೋ, ಕಾದು ನೋಡಬೇಕು. ಬಹುಶಃ ಆ ಬಂದ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆ “ಕರ್ನಾಟಕಕ್ಕೆ ಏನಾದರೋ ಬೆಳಗಾವಿ ವಿಷಯದಲ್ಲಿ ಅನ್ಯಾಯ ಮಾಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ” ಎಂದು ನನ್ನ ಅನಿಸಿಕೆ. ಏನೇ ಇರಲಿ, ಆ ವಿಷಯ ಪಕ್ಕಕ್ಕಿಡೋಣ.

ಒಂದು ಸ್ವಾರಸ್ಯಕರ ಸಂಗತಿಯನ್ನು ನಾನು ಬಂದ್‍ನಲ್ಲಿ ನೋಡಿದೆ. ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲೆಲ್ಲಾ ಅಂಟಿಸಿದ್ದ ಭಿತ್ತಿ ಪತ್ರವನ್ನು ಓದಿದರೆ, ಎಲ್ಲರಿಗೂ ಕಾಣುವಂತಹ ವಾಕ್ಯ “ಬೆಳಗಾವಿ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್“. ನನಗೆ ಈ ವಾಕ್ಯದಲ್ಲಿ ಕಂಡು ಬಂದ ಸ್ವಾರಸ್ಯಕರ ಪದ ‘ಮಲತಾಯಿ ಧೋರಣೆ‘. ನಾವು ಏನಕ್ಕೆ ಈ ಪದವನ್ನು ಈ ತರಹದ ಸ್ಠಿತಿಗಳಲ್ಲಿ ಬಳಸುತ್ತೇವೆ ?? ಮಲ ತಾಯಂದಿರನ್ನು ಈ ತರಹದ ಸಂಬಂಧಗಳಿಗೆ Branded ಮಾಡಿಬಿಟ್ಟಿದ್ದೇವಲ್ಲವೆ ?? ಕೆಲ ಮಲತಾಯಂದಿರು Partiality ಮಾಡಬಹುದು. ಅಂಥವರನ್ನು ನಾನು ಕೂಡ ನೋಡಿದ್ದೇನೆ. ಹೆಚ್ಚಿನ ಟೀವಿ ದಾರಾವಾಹಿಗಳಲ್ಲಿ ಕೂಡ ಅದನ್ನೇ ತೋರಿಸುತ್ತಾರೆ.

ನೋಡಿ, ಕೆಲವರನ್ನು ನೋಡಿ ಜನ ಎಲ್ಲಾ ಮಲತಾಯಂದಿರೂ Partiality ಮಾಡುತ್ತಾರೆ ಅಂತ ಪಟ್ಟ ಕಟ್ಟಿದ್ದಾರೆ !!! ಇದೇ ರೀತಿ ಇನ್ನು ಹಲವು ಉದಾಹರಣೆಗಳನ್ನು ಕೊಡಬಹುದು. ರಾಜ್‍ಕುಮಾರ್ ನಿಧನರಾದಾಗ ನಡೆದ ಗಲಾಟೆಯಿಂದ, ಹೊರಗಿನವರು ಕನ್ನಡಿಗರೆಲ್ಲಾ ಹೀಗೆ ಎಂದು ಕರೆದಿದ್ದರು!!. ನೋಡಿ ಜನ ಕೆಲವರನ್ನ ನೋಡಿ ಎಲ್ಲರನ್ನೂ ಹೇಗೆ Generalise ಮಾಡುತ್ತಾರೆ !! ಇರಲಿ ಬಿಡಿ … ಬಂದ್‍ ದಿನದ ಅಪರೂಪದ ಸಂಗತಿಗಳು ಇನ್ನೂ ಇವೆ.

ಬಂದ್ ದಿನದ ರಜೆ ಅಂದರೆ, ಎನೋ ಒಂದು ತರಹದ Uneasyness. ಮಾಡಲು ಏನೂ ಕೆಲಸವಿರೋದಿಲ್ಲ. ಹೊರಗೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಾಣದ Calmness. ಒಂದು ತರಹ Uneasy Calm. ಹೊರಗೆ ರಸ್ತೆಯಲ್ಲಿ Vehicleಗಳ ಅಬ್ಬರ ಇಲ್ಲ. ಬಂದ್ ದಿನ ಎಷ್ಟು ಹೊತ್ತಾದರೂ ಸಮಯವೇ ಹೋಗುವುದಿಲ್ಲ. ಅದರ ಮೇಲೆ ಟೀವಿಯಲ್ಲಿ ಕೂಡ ಬಹುಪಾಲು ಚಾನೆಲ್‍ಗಳೂ ಬಂದ್. ಸುತ್ತಮುತ್ತ ಎಲ್ಲಿ ನೋಡಿದರೂ ಸಂಪೂರ್ಣ ನಿಶ್ಯಬ್ಧ. ಬಹುಶಃ ನಾನು Hostel ಬಿಟ್ಟ ಮೇಲೆ, ತುಂಬ ದಿನಗಳ ನಂತರ ಹಕ್ಕಿಗಳ ಚಿಲಿ-ಪಿಲಿಯನ್ನು ಕೇಳಿದೆ. ದಿನಾ ಹಕ್ಕಿಗಳ ಚಿಲಿ-ಪಿಲಿ ಇದ್ದರೂ, ಹೊರಗಿನ ಗಲಾಟೆಯಲ್ಲಿ ಅದು ಕೇಳುವುದೇ ಇಲ್ಲ !! ನಾವು ಅದನ್ನೇ ಗಮನ ಇಟ್ಟು ಕೇಳಿಸಿಕೊಳ್ಳುವುದಕ್ಕೆ ನಮಗೆ ಅಷ್ಟು ಸಮಯ, ಸಂಯಮ ಎಲ್ಲಿ ? ಈ ದಿನಗಳ ವೇಗದ ಬದುಕಿನಲ್ಲಿ ನಮಗೆ ನಮ್ಮ ಕೆಲಸವಲ್ಲದೇ, ಇನ್ನೂ ಒಂದು ಪ್ರಪಂಚ ಇದೆ. ಮರ, ಗಿಡ, ಹಕ್ಕಿ, ಪ್ರಾಣಿಗಳೂ ಇವೆ ಎಂಬುದನ್ನು ಮರೆತ್ತಿದ್ದೇವೆ. ಅಥವಾ ನಮಗೆ ಆ ಪ್ರಪಂಚದಲ್ಲಿ ಕಾಲ ಕಳೆಯುವುದಕ್ಕೆ ಸಮಯ ಇಲ್ಲದಾಗಿದೆ.

ಚಿಕ್ಕವರಾಗಿದ್ದಾಗ ಜೀವನವೇ ಒಂದು ಆನಂದ. ಆಟ-ಪಾಠ, ದಸರಾ, ಬೇಸಿಗೆಯ ರಜೆಗಳು ನಮ್ಮನ್ನು ಪ್ರಕೃತಿ ಜೊತೆ ಕಾಲ ಕಳೆಯಲು ಸಾಕಷ್ಟು ಸಮಯ ನೀಡುತ್ತಿದ್ದವು. ದೊಡ್ಡವರಾಗುತ್ತಾ, ಆ ರಜಾ ದಿನಗಳೂ ಇಲ್ಲ, ಪ್ರಕೃತಿಯ ಜೊತೆ ಕಾಲ ಕಳೆಯುವುದಕ್ಕೆ ಸಮಯವೂ ಇಲ್ಲದಂತಾಗಿದೆ.

ಅದಕ್ಕೆ ಗೋಪಾಲ ಕೃಷ್ಣ ಅಡಿಗರು ‘ಯಾವ ಮೋಹನ ಮುರಳಿ’ಯಲ್ಲಿ ಹೇಳಿದ್ದು - “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆವುದೇ ಜೀವನ’. ಈ ವಾಕ್ಯ ಎಷ್ಟು ನಿಜ ಅಲ್ಲವೇ !!!

ಪ್ರಜಾವಾಣಿ v/s ವಿಜಯ ಕರ್ನಾಟಕ

ಇದು ನಾನು ನನ್ನ ಅಮ್ಮನ ಜೊತೆ ಸದಾ ನಡೆಯುವ ವಾಗ್ವಾದದ ವಿಷಯ !!
ನಾನು ಪ್ರಜಾವಾಣಿಯ ಕಡೆ, ನನ್ನ ಅಮ್ಮ ವಿಜಯ ಕರ್ನಾಟಕದ ಕಡೆ !!!

ನನಗೂ ಪ್ರಜಾವಾಣಿಗೂ ಅದೇನೋ ನಂಟು. ಯಾವ ತರಹದ ನಂಟು, ಸರಿಯಾಗಿ ಗೊತ್ತಿಲ್ಲ….

ಬಾಲ್ಯದಿಂದಲೂ ಪ್ರತಿದಿನ ಪ್ರಜಾವಾಣಿ ಓದುವ ಅಭ್ಯಾಸ. ಈಗಲೂ ಕೂಡ Online e-paper ಓದುತ್ತೇನೆ. ಪ್ರಜಾವಾಣಿಯ ಪುಟಗಳು, ಅದರ ಪುರವಣಿಗಳು ಅದೇನೊ ಕಣ್ಣಿಗೆ ಮುದ ನೀಡುತ್ತವೆ. ಪ್ರಜಾವಾಣಿಯ fonts, typeset ಗೆ ನಾನು ಬಹುಶಃ ಹೊಂದಿಕೊಂಡಿದ್ದೇನೆ. ‘ಸಾಪ್ತಾಹಿಕ ಪುರವಣಿ’, ‘ಮಕ್ಕಳು ಮನೋರಂಜನೆ’, ‘ಸಿನೆಮಾ ರಂಜನೆ’ ಪುರವಣಿಗಳನ್ನು ಪೂರ್ತಿಯಾಗಿ ಓದುತ್ತೇನೆ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’, ವಾಸುದೇವರ ವಿಜ್ಞಾನ ಲೇಖನಗಳನ್ನು ಕೂಡ. ಪ್ರಜಾವಾಣಿ 50 ವರ್ಷಗಳಿಂದ ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಅದು Impartial ಕೂಡ ಹೌದು ಅನ್ನೋದು ನನ್ನ ಅಭಿಪ್ರಾಯ. ಅದರ ಸುದ್ದಿಗಳಲ್ಲಿಯೂ ಏನೋ ಒಂದು ಸಮಗ್ರತೆ ಇದೆ, ಒಂದು ಘನತೆ ಇದೆ.

ಇನ್ನು ವಿಜಯ ಕರ್ನಾಟಕದ ವಿಷಯಕ್ಕೆ ಬಂದರೆ, ಮೊದಲನೆಯದಾಗಿ, ಪಕ್ಕಾ Business Minded, Partial. ಬಹುಶಃ ಅದು ತನ್ನ Circulation ಹೆಚ್ಚಿಸಿಕೊಂದಿದ್ದು ತನ್ನ ‘ರೂ 1′ ತಂತ್ರದಿಂದ. ವಿಜಯ ಕರ್ನಾಟಕ ಈಗ Times of India ಒಡೆತನಕ್ಕೆ ಸೇರಿಯಾಯ್ತು. ಇನ್ನು ಮುಂದೆ ಹೇಗೋ ಏನೋ…. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಕರ್ನಾಟಕದಲ್ಲಿ ಬರುತ್ತಿದ್ದ ಸುದ್ದಿಗಳು, ಲೇಖನಗಳನ್ನು ನೊಡಿದರೆ ತುಂಬಾ ಸಿಟ್ಟು ಬರುತ್ತದೆ. ಪತ್ರಿಕೆಯ ಪೂರ್ತಿ ‘ಕನ್ನಡ ನಾಡು’ ಪಾರ್ಟಿಯ ವಿಷಯಗಳೇ!!! ಅದನ್ನು ಯಾರು ಓದುತ್ತಿದ್ದರೋ ಗೊತ್ತಿಲ್ಲ !! ಮೊದಲನೆಯ ಪುಟದಿಂದ ಕೊನೆಯ ಪುಟದವರೆಗೂ ಕೇವಲ ‘ತೆಂಗಿನ ಕಾಯಿ’ಯ ಜಾಹೀರಾತುಗಳೆ ತುಂಬಿರುತ್ತಿದ್ದವು. ಇಷ್ಟೆಲ್ಲಾ ಮಾಡಿದ್ದರೂ ಕೊನೆಗೆ ಶ್ರೀಮಾನ್ ವಿಜಯ ಸಂಕೇಶ್ವರರೇ ಗೆಲ್ಲಲ್ಲಿಲ್ವಲ್ಲಾ!! ಛೇ !!! ಆಮೇಲೆ ವಿಜಯ ಸಂಕೇಶ್ವರರು ಜನತಾದಳ ಸೇರಿದ ಮೇಲೆ ಬರೀ ಜನತಾದಳದ್ದೇ ಸುದ್ದಿ.

ಆದರೆ ವಿಜಯ ಕರ್ನಾಟಕ ಕರ್ನಾಟಕದಲ್ಲಿ ನಂ 1 ಏಕೆ ಎಂಬುದು ನನ್ನನ್ನು ಕಾಡುತ್ತಿರುವ ಯಕ್ಷಪ್ರಶ್ನೆ !! ವಿಜಯ ಕರ್ನಾಟಕದ ಸಂಪಾದಕೀಯದಲ್ಲಿ ಪ್ರಜಾವಾಣಿಗಿಂತ ಕೆಲವು ಹೆಚ್ಚು ಲೇಖನಗಳು ಬರುತ್ತವೆ. ಆದರೆ ಕೇವಲ ಸಂಪಾದಕ್ಕೀಯಕ್ಕೋಸ್ಕರ ಜನ ವಿಜಯ ಕರ್ನಾಟಕ ಓದುತ್ತಾರ ?

ಬಹುಶಃ ಬಹಳ ವರ್ಷಗಳಿಂದ ಕನ್ನಡ ಪತ್ರಿಕೆಗಳಲ್ಲಿ ಹೆಚ್ಚು ಪ್ರಸಾರ ಹೊಂದಿದ್ದ ಪ್ರಜಾವಾಣಿ ಜನರಿಗೆ Monotonous ಆಯ್ತೇ ??

ಆದರೂ ನನಗೆ ಈಗಲೂ ಪ್ರಜಾವಾಣಿ ಎಂದರೆ ಅದೇನೋ ಪ್ರೀತಿ, ಅದೇನೋ ಗೌರವ. ಬಿಡಿಸಲಾಗದ ನಂಟು ಅನ್ನಿಸುತ್ತೆ !!!!

ವಿವಿಧತೆಯಲ್ಲಿ ಏಕತೆ ???

ಇದು ನಿಜವೇ ? ನಾವು ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಇದು ನಿಜವೆ?

ನಮ್ಮ ದೇಶದಲ್ಲಿ ನಮ್ಮ ವಿವಿಧ ಭಾಷೆಯಿದೆ, ಸಂಸ್ಕೃತಿಯಿದೆ. ಇದು ನಿಜವಾಗಿ ದೇಶದ ಬೆಳವಣಿಗೆ ಪೂರಕವಗಿದೆಯೆ ? ಭಾರತದ ದಕ್ಷಿಣ ರಾಜ್ಯಗಳು ದಿನವೂ ಜಗಳವಾಡುತ್ತಿವೆ. ಇದು ಕೇವಲ ರಾಜಕೀಯವೋ ಅಥವಾ ಜನರ ಅಭಿಪ್ರಾಯವೂ ಹೌದೆ ? ಕರ್ನಾಟಕ ತನ್ನ ಸುತ್ತ ಇರುವ ಎಲ್ಲಾ ರಾಜ್ಯಗಳ ಜತೆ ಯಾವುದಾದರೊಂದು ವಿಷಯಕ್ಕೆ ಸಂಬಂಧವನ್ನು ಹಾಳು ಮಾಡಿಕೊಂಡಿದೆ. ಗೋವದ ಜೊತೆ ಮಹಾದಾಯಿ ವಿಷಯಕ್ಕೆ, ತಮಿಳುನಾಡಿನೊಂದಿಗೆ ಕಾವೇರಿ ವಿಷಯಕ್ಕೆ, ಆಂಧ್ರದ ಜತೆಗೆ ಕೃಷ್ಣೆಯ ವಿಷಯಕ್ಕೆ. ಮಹಾರಾಷ್ಟ್ರದ ಜತೆಗೆ ಸ್ವಾತಂತ್ರ್ಯ ಬಂದಾಗಿಂದಾಗಲು ಬೆಳಗಾವಿ ವಿಷಯಕ್ಕೆ…. ಇನ್ನು ಕೇರಳದ ಜತೆ ಇದ್ದಿದ್ದರಲ್ಲಿ ಸ್ವಲ್ಪ ವಾಸಿ. ಬಹುಶಃ ಕಾಸರಗೋಡು ಮುಂದೆ ಅದಕ್ಕೆ ಕಾರಣವಾಗಬಹುದು.

ಏಕೆ ಕರ್ನಾಟಕ ಹೀಗೆ ? ಇಲ್ಲಿ ನಮ್ಮ ಸುತ್ತ ಇರುವ ರಾಜ್ಯಗಳು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆಯೇ ??? ಅಥವಾ ಕನ್ನಡಿಗರಲ್ಲೇ ಏನೋ ಕೊರತೆ ಇದೆಯೇ ?? ಕನ್ನಡಿಗರಲ್ಲಿ ಏನಾದರೋ ಒಂದು Insecurity feeling ಇದೆಯಾ ??

ಬಹುಶಃ ಭಾರತವನ್ನು ಭಾಷೆಯ ಆಧಾರದಲ್ಲಿ ವಿಂಗಡಿಸಿದ್ದೆ ತಪ್ಪಾಯಿತೆ ? ಇಡೀ ಭಾರತದಲ್ಲಿ ಕೇವಲ ಒಂದೆ ಭಾಷೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವೆ ? ಈ ದಿನಾ ನಡೆಯುವ ಜಗಳ, ಉಚ್ಛ ನ್ಯಾಯಲಯದ ಹೋರಾಟಗಳು ನಡೆಯುತ್ತಿರಲಿಲ್ಲ ಅಲ್ಲವೆ ? ನಮ್ಮ ನದಿಗಳು ಕೇವಲ ಒಂದೇ ರಾಜ್ಯದಲ್ಲಿ ಹರಿದಿದ್ದರೆ ಚೆನ್ನಾಗಿರುತ್ತಿತ್ತು ಅಲ್ವೆ ? ಕಾವೇರಿ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ ? ಕನ್ನಡ ಮೇಲೋ ? ತಮಿಳು ಮೇಲೋ ಅಥವಾ ತೆಲುಗು ಮೇಲೋ ವಿಷಯಗಳೇ ಇರುತ್ತಿರಲಿಲ್ಲ. ನಾವೆಲ್ಲ ಎಷ್ಟು ಸ್ವಾರ್ಥಿಗಳಾಗಿದ್ದೇವೆ ಅಲ್ಲವೆ ? ಎಲ್ಲವೂ ನಮಗೇ ಬೇಕು ಎನ್ನುವ ಮನೋಭಾವ ಏತಕ್ಕೆ ? ನಾವು ಮೇಲು ಎಂಬ ವಿಷಯ ಏಕೆ ?

ಈ ತರಹದ ಜಗಳಗಳು ಕೇವಲ ನಮ್ಮ ಭಾರತದಲ್ಲೇ ಇವೆಯೆ? ಅಥವಾ ಜಗತ್ತಿನ ಬೇರೆ ದೇಶಗಳಲ್ಲೂ ಇವೆಯೆ ?

ಈ ಎಲ್ಲಾ ಪ್ರಶ್ನೆಗಳಿಗೆ ನನಗೆ ಉತ್ತರ ತಿಳಿಯುತ್ತಿಲ್ಲ. ನಮ್ಮ ದೇಶದಲ್ಲಿರುವ Regionalism ನಮ್ಮ ದೇಶವನ್ನು ಒಡೆಯುತ್ತಿವೆ… ಬಹುಶಃ ನಾವು ನಮ್ಮ ದೇಶವನ್ನು “ವಿವಿಧತೆಯಲ್ಲಿ ಏಕತೆ” ಎಂಬುದನ್ನು ಹೇಳುವುದನ್ನು ನಿಲ್ಲಿಸಬೇಕಷ್ಟೆ !

Follow

Get every new post delivered to your Inbox.